ನೆಹರೂ, ಮೋತಿಲಾಲ್
	1861--1931. ನಿಷ್ಣಾತ ವಕೀಲ, ರಾಜಕಾರಣಿ, ಕುಶಲಶಾಸಕ, ಸ್ವಾತಂತ್ರ್ಯಯೋಧ. ನೆಹರೂಗಳದು ಕಾಶ್ಮೀರಿ ಮನೆತನ. ಆದರೆ 18ನೆಯ ಶತಮಾನದಿಂದ ಈ ಮನೆತನ ದೆಹಲಿಯಲ್ಲಿ ನೆಲಸಿತ್ತು. ತಂದೆ ಗಂಗಾಧರರು ದೆಹಲಿಯ ಕೊತ್ವಾಲರಾಗಿದ್ದರು. 1857ರ ಮಹಾ ಬಂಡಾಯದ ಕಾಲದಲ್ಲಿ ಬ್ರಿಟಿಷರು ದೆಹಲಿಯನ್ನು ಉಡಾಯಿಸಿದಾಗ ಗಂಗಾಧರರು ಹೆಂಡತಿ ಜಯರಾಣಿ ಮತ್ತು ನಾಲ್ವರು ಮಕ್ಕಳೊಂದಿಗೆ ಆಗ್ರಕ್ಕೆ ಹೋಗಿ ಅಲ್ಲಿ ನೆಲೆಸಿದರು. ನಾಲ್ಕು ವರ್ಷಗಳ ಅನಂತರ ಅವರು ತೀರಿಕೊಂಡರು. ಆಮೇಲೆ ಮೂರು ತಿಂಗಳಿಗೆ, 1861ರ ಮೇ 6ರಂದು ಮೋತಿಲಾಲರು ಜನಿಸಿದರು. ಮೋತಿಲಾಲರ ಒಬ್ಬ ಅಣ್ಣ ಬನ್ಸೀಧರ್ ಬ್ರಿಟಿಷ್ ಸರ್ಕಾರದ ನ್ಯಾಯಾಂಗ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಇನ್ನೊಬ್ಬ ಅಣ್ಣ ನಂದಲಾಲರು ಖೇತ್ರಿ ಸಂಸ್ಥಾನದಲ್ಲಿ 10 ವರ್ಷ ದಿವಾನರಾಗಿದ್ದು ಅನಂತರ ನ್ಯಾಯಶಾಸ್ತ್ರದ ವ್ಯಾಸಂಗ ಮಾಡಿ ಆಗ್ರದಲ್ಲಿ ವಕೀಲಿಯನ್ನಾರಂಭಿಸಿದರು. ಉಚ್ಚನ್ಯಾಯಾಲಯ ಆಗ್ರದಿಂದ ಅಲಹಾಬಾದಿಗೆ ವರ್ಗವಾದಾಗ ನಂದಲಾಲರೂ ಕುಟುಂಬಸಮೇತ ಅಲ್ಲಿಗೆ ಹೋದರು.

	ಮೋತಿಲಾಲ್ ನಂದಲಾಲರ ಬಳಿಯಲ್ಲಿ ಬೆಳೆದರು. ಅವರ ಶಾಲಾ ಕಾಲೇಜು ಶೀಕ್ಷಣ ಕಾನ್‍ಪುರ ಅಲಹಾಬಾದುಗಳಲ್ಲಿ ನಡೆಯಿತು. ಕಾನ್‍ಪುರದಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅವರು ಅಲಹಾಬಾದಿನ ಮುಯಿರ್ ಸೆಂಟ್ರಲ್ ಕಾಲೇಜನ್ನು ಸೇರಿದರು. ಬ್ರಿಟಿಷ್ ಅಧ್ಯಾಪಕರೊಂದಿಗೆ ಅವರ ಸಂಪರ್ಕ ಬೆಳೆಯಿತು. ಇದು ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ಅವರು ಜೀವನದ ಬಗ್ಗೆ ಹೆಚ್ಚಿನ ಅರಿವಿನ, ವಿವೇಕಪೂರ್ಣವಾದ ಮತ್ತು ಪರೀಕ್ಷಿಸದೆ ಯಾವುದನ್ನೂ ಒಪ್ಪದಿರುವ ಮನೋಭಾವ ಬೆಳಸಿಕೊಂಡರು. ಇಂಗ್ಲಿಷ್ ಸಂಸ್ಕøತಿ ಸಂಸ್ಥೆಗಳಲ್ಲಿ ಗೌರವ ತಳೆದರು.

	ಮೋತಿಲಾಲರು ಬಿ.ಎ. ಪರೀಕ್ಷೆಯನ್ನು ಪೂರ್ತಿಯಾಗಿ ತೆಗೆದುಕೊಳ್ಳಲಿಲ್ಲ. ಆದರೆ 1883ರಲ್ಲಿ ವಕೀಲಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮರಾಗಿ ತೇರ್ಗಡೆಯಾಗಿ ಸುವರ್ಣ ಪದಕ ಪಡೆದರು. ಅನಂತರ ಕಾನ್‍ಪುರದಲ್ಲಿ ಮೂರು ವರ್ಷಗಳ ಕಾಲ ವಕೀಲರಾಗಿದ್ದರು. 1886ರಲ್ಲಿ ಅಲಹಾಬಾದಿಗೆ ಹೋಗಿ ನಂದಲಾಲರನ್ನು ಕೂಡಿಕೊಂಡರು. ನಂದಲಾಲರು 1887ರ ಏಪ್ರಿಲ್‍ನಲ್ಲಿ ತೀರಿಕೊಂಡರು. ದೊಡ್ಡ ಕುಟುಂಬವನ್ನು ಪೋಷಿಸುವ ಭಾರ ಮೋತಿಲಾಲರ ಮೇಲೆ ಬಿತ್ತು. ಅದನ್ನು ಅವರು ಧೈರ್ಯದಿಂದ ವಹಿಸಿಕೊಂಡರು. ತಮ್ಮ ವೃತ್ತಿಯಲ್ಲಿ ಹೆಸರು ಗಳಿಸಬೇಕೆಂಬ ಆಕಾಂಕ್ಷೆಯಿಂದ ದುಡಿದರು. ಅವರ ಕೀರ್ತಿ ಹಬ್ಬಿತು. ಮೋತಿಲಾಲರ ಕರ್ತವ್ಯ ಪರಾಯಣತೆ ವಾಗ್ವೈಖರಿಗಳಿಗೆ ಇಂಗ್ಲಿಷ್ ನ್ಯಾಯಾಧೀಶರು ಮಾರುಹೋಗಿದ್ದರು. ಅವರ ವರಮಾನ ಹೆಚ್ಚಿತು. ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದ ಪ್ರಮುಖ ವಕೀಲರಲ್ಲೊಬ್ಬರಾದರು.

	ಇಪ್ಪತ್ತನೆಯ ವಯಸ್ಸಿನಲ್ಲಿ ಮೋತಿಲಾಲರ ಮದುವೆಯಾಗಿತ್ತು. ಅವರ ಹೆಂಡತಿ ಒಂದು ಮಗುವನ್ನು ಹೆತ್ತು ತೀರಿಕೊಂಡರು. ಕೆಲವು ದಿನಗಳಲ್ಲಿ ಮಗುವೂ ತಾಯಿಯನ್ನು ಹಿಂಬಾಲಿಸಿತು. ಅನಂತರ ಅವರು ಸ್ವರೂಪರಾಣಿಯನ್ನು ಮದುವೆಯಾದರು. 1889ರ ನವೆಂಬರ್ 14ರಂದು ಅವರು ಜವಾಹರಲಾಲರಿಗೆ ಜನ್ಮವಿತ್ತರು. ಸ್ವರೂಪ್ (ವಿಜಯಲಕ್ಷ್ಮಿ ಪಂಡಿತ್) ಮತ್ತು ಕೃಷ್ಣಾ (ಕೃಷ್ಣಾ ಹತೀಸಿಂಗ್) ಇವರು ಮೋತಿಲಾಲರ ಹೆಣ್ಣುಮಕ್ಕಳು. ಸ್ವರೂಪ್ 1900ರಲ್ಲೂ ಕೃಷ್ಣಾ 1907ರಲ್ಲೂ ಹುಟ್ಟಿದರು.

	1900ರಲ್ಲಿ ಮೋತಿಲಾಲರು ಚರ್ಚ್ ರಸ್ತೆಯಲ್ಲಿ (ಈಗ ಮೋತಿಲಾಲ್ ನೆಹರೂ ಮಾರ್ಗ) ಮನೆಯೊಂದನ್ನು ಕ್ರಯಕ್ಕೆ ಕೊಂಡು ದುರಸ್ತಿ ಮಾಡಿಸಿ ಅದಕ್ಕೆ ಆನಂದ ಭವನವೆಂದು ಹೆಸರಿಟ್ಟರು. ಅಲಹಾಬಾದಿನಲ್ಲಿ ಪ್ರಪ್ರಥಮವಾಗಿ ಈಜುಕೊಳ ಮತ್ತು ವಿದ್ಯುತ್‍ದೀಪಗಳನ್ನು ಹೊಂದಿದ ಮನೆಯದು.

	ಮೋತಿಲಾಲರಿಗೆ ಯಾವುದಕ್ಕೂ ಕೊರತೆಯಿರಲಿಲ್ಲ. ಅವರ ಸಂಪತ್ತು ಅಪಾರವಾಗಿತ್ತು. ಅವರ ಅದ್ಧೂರಿಯ ಜೀವನ ರಾಜಕುಮಾರರ ಜೀವನವನ್ನೂ ಮೀರಿಸಿತ್ತು. ಅವರ ಬಟ್ಟೆಗಳು ಪ್ಯಾರಿಸ್‍ನಲ್ಲಿ ಒಗೆದು ಇಸ್ತ್ರಿಯಾಗಿ ಬರುತ್ತಿದ್ದುವಂತೆ. ಮನೆಯಲ್ಲಿ ಆಳುಗಳ ಸೈನ್ಯವೇ ಇತ್ತು. ಬೇಟೆ ಮತ್ತು ಕುದುರೆಸವಾರಿ ಅವರಿಗೆ ತುಂಬಾ ಇಷ್ಟವಾಗಿದ್ದುವು. ಅವರು ಸ್ವಭಾವತಃ ಉದಾರಿಗಳು. ಬಡವರಿಗೆ, ಬೇಡಿದವರಿಗೆ ಅವರು ಉದಾರವಾಗಿ ದಾನ ಮಾಡುತ್ತಿದ್ದರು. ಮನೆ ಯಾವಾಗಲೂ ಜಾತ್ರೆಯಂತಿರುತ್ತಿತ್ತು.

	1905ರ ಮೇ ತಿಂಗಳಲ್ಲಿ ಮೋತಿಲಾಲರು ಕುಟುಂಬಸಮೇತ ಯೂರೋಪಿನ ಪ್ರವಾಸ ಕೈಗೊಂಡರು. ಭಾರತಕ್ಕೆ ಮರಳುವಾಗ ಜವಾಹರರನ್ನು ಹ್ಯಾರೋ ಶಾಲೆಗೆ ಸೇರಿಸಿದರು. ಜವಾಹರರು ಹ್ಯಾರೋನಿಂದ ಕೇಂಬ್ರಿಜ್ ವಿಶ್ವವಿದ್ಯಾಲಯ ಸೇರಿ ಟೈಪಾಸ್ ಪಡೆದು ಪದವೀಧರರಾಗಿ 1921ರಲ್ಲಿ ಬ್ಯಾರಿಸ್ಟರ್ ಆದರು.

	ಮೋತಿಲಾಲರು ಸ್ವದೇಶಕ್ಕೆ ಮರಳಿದ ಬಳಿಕ ಪಾಶ್ಚಾತ್ಯ ಜೀವನ ರೀತಿಯನ್ನು ಪೂರ್ಣವಾಗಿ ಅನುಕರಿಸತೊಡಗಿದರು. ಬಹುಶಃ ಮೊತ್ತಮೊದಲಿಗೆ ಇಂಗ್ಲೆಂಡಿನಿಂದ ಕಾರನ್ನು ತರಿಸಿದವರು ಅವರೇ. ಅವರಲ್ಲಿ ಮದ್ಯಮಾಂಸಗಳಿಗೆ ನಿಷೇಧವಿರಲಿಲ್ಲ. ಯೂರೋಪಿನ ಪ್ರವಾಸ ಮುಗಿಸಿ ಬಂದಮೇಲೆ ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಲಿಲ್ಲ. ಅದಕ್ಕಾಗಿ ಅವರಿಗೆ ಪಂಥದ ಮುಖಂಡರು ಬಹಿಷ್ಕಾರ ಹಾಕಿದರು. ಅದರೆ ಅವರು ಅದಕ್ಕೆ ಸೊಪ್ಪುಹಾಕಲಿಲ್ಲ.

	ಜ್ಞಾನವಿಜ್ಞಾನಗಳಲ್ಲಿ, ವ್ಯಾಪಾರ ವಾಣಿಜ್ಯಗಳಲ್ಲಿ ಮತ್ತು ರಾಜಕೀಯದಲ್ಲಿ ಮುಂದುವರಿದಿದ್ದ ಬ್ರಿಟಿಷರನ್ನು ಮೋತಿಲಾಲರು ಗೌರವಿಸುತ್ತಿದ್ದರು. ಅವರ ಗುಣಸಾಮಥ್ರ್ಯಗಳನ್ನು ಮೆಚ್ಚಿಕೊಂಡಿದ್ದರು. ಅವರ ಅಡಳಿತದ ಬಗ್ಗೆ ಮೋತಿಲಾಲರಿಗೆ ತಾತ್ಸಾರವಿರಲಿಲ್ಲ. ಗವರ್ನರರೇ ಮೊದಲಾದ ಉನ್ನತ ಹುದ್ದೆಯ ವ್ಯಕ್ತಿಗಳೊಡನೆಯೂ ಅವರು ಸರಿಸಮಾನರಂತೆ ವರ್ತಿಸುತ್ತಿದ್ದರು. ಅವರಿಗಾಗಿ ಆಗಾಗ್ಗೆ ಭೋಜನ ಉಪಾಹಾರ ಕೂಟಗಳನ್ನು ಏರ್ಪಡಿಸುತ್ತಿದ್ದರು; ಯಥೇಚ್ಛ ಖರ್ಚು ಮಾಡುತ್ತಿದ್ದರು. ಮುಸಲ್ಮಾನ ಶ್ರೀಮಂತರಿಗೂ ಅವರಲ್ಲಿ ಅಹ್ವಾನವಿರುತ್ತಿತ್ತು. ಅವರು ಮತಾಂಧರಾಗಿರಲಿಲ್ಲ. ಜಾತೀಯತೆ ಅವರನ್ನು ಎಂದಿಗೂ ಸೋಕಲಿಲ್ಲ.

	ಕೆಲಸದ ಒತ್ತಡದಿಂದಾಗಿ ಮೋತಿಲಾಲರಿಗೆ ರಾಜಕೀಯದಲ್ಲಿ ಮನಸ್ಸು ಹಾಕಲು ಪುರುಸೊತ್ತು ಇರಲಿಲ್ಲ. ಅ ವಿಷಯದಲ್ಲಿ ಅವರಿಗೆ ಅಸಕ್ತಿಯೂ ಇರಲಿಲ್ಲ. ಬಡತನ ದಾರಿದ್ರ್ಯಗಳನ್ನು ಅರಿಯದ ಅವರಿಗೆ ಭಾರತದಲ್ಲಿ ಬಡವರು ಯಾವ ಕೀಳುಮಟ್ಟಕ್ಕೆ ಇಳಿದಿದ್ದರೆನ್ನುವುದರ ಅರಿವು ಇರಲಿಲ್ಲ. ಭಾರತೀಯರ ದಾರಿದ್ರ್ಯಕ್ಕೆ ಬ್ರಿಟಿಷರ ಆಡಳಿತ ಧೋರಣೆ ಕಾರಣವೆಂದು ಅವರು ನಂಬುತ್ತಿರಲಿಲ್ಲ. ರಾಜಕಾರಣ, ಸ್ವಾತಂತ್ರ್ಯ ಮುಂತಾದ ಪದಗಳು ಅವರ ಪಾಲಿಗೆ ಅರ್ಥಶೂನ್ಯವಾಗಿದ್ದುವು.

	ಅದರೆ ಮೋತಿಲಾಲರಿಗೆ ರಾಜಕಾರಣದಿಂದ ಪೂರ್ಣವಾಗಿ ಅಲಿಪ್ತರಾಗಿರುವುದು ಶಕ್ಯವಾಗದೆ ಹೋಯಿತು. ಪ್ರಥಮದಲ್ಲಿ ಅವರು ರಾಜಕೀಯದಲ್ಲಿ ಭಾಗವಹಿಸುವ ಪ್ರಸಂಗಗಳು ಅಪರೂಪವೂ ಅಲ್ಪಕಾಲದವೂ ಆಗಿದ್ದವು. 1888ರ ಅಲಹಾಬಾದ್ ಕಾಂಗ್ರೆಸ್ ಅಧಿವೇಶನದ 1,400 ಪ್ರತಿನಿಧಿಗಳ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ಅನಂತರ ಕೆಲವು ಕಾಂಗ್ರೆಸ್ ಅಧಿವೇಶನಗಳಲ್ಲೂ ಅವರು ಕೇವಲ ಪ್ರೇಕ್ಷಕರಂತೆ ಹಾಜರಿದ್ದರು. ಕಾಲಕಳೆದಂತೆ ಕಾಂಗ್ರೆಸ್ ತನ್ನ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ಸ್ಪಷ್ಟವಾದ ನಿಲವನ್ನು ತಾಳತೊಡಗಿತು. ವಂಗ ವಿಭಜನೆಯ ಅನಂತರ ಸಂಸ್ಥೆಯಲ್ಲಿ ಮಿತವಾದಿ ಮತ್ತು ಉಗ್ರಗಾಮಿಗಳೆಂಬ ಎರಡು ಪಂಗಡಗಳುಂಟಾದುವು. ಟಿಳಕ್, ಅರವಿಂದ ಘೋಷ್, ಲಾಲಾ ಲಜಪತ್‍ರಾಯ್ ಮೊದಲಾದವರು ಉಗ್ರಗಾಮಿ ಸಂಗಡದವರಾಗಿದ್ದರು. ಮಿತವಾದಿಗಳನ್ನು ಕೂಡಿಕೊಂಡಿದ್ದ ಮೋತಿಲಾಲರು ಉಗ್ರಗಾಮಿಗಳ ವರ್ತನೆ ಧೋರಣೆಗಳನ್ನು ಲೇಖನಗಳ ಮೂಲಕ ಖಂಡಿಸಿದರು.

	1907ರಲ್ಲಿ ಮೋತಿಲಾಲರು ಮಿತವಾದಿ ರಾಜಕೀಯ ವ್ಯಕ್ತಿಗಳ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದು ಅದೇ ಮೊದಲಿಗೆ. 1909ರಲ್ಲಿ ಮಿಂಟೊ-ಮಾರ್ಲೆ ಸುಧಾರಣೆಗಳು ಜಾರಿಗೆ ಬಂದುವು. ಅದರಿಂದ ಭಾರತೀಯರು ಪ್ರಾಂತೀಯ ವಿಧಾನಸಭೆಗಳಲ್ಲಿ ಭಾಗವಹಿಸುವಂತಾಯಿತು. ಘಟನಾತ್ಮಕ ವಿಧಾನದಲ್ಲಿ ವಿಶ್ವಾಸ ತಾಳಿದ್ದ ಮೋತಿಲಾಲರು ಸಂಯುಕ್ತ ಪ್ರಾಂತ್ಯದ ವಿಧಾನಪರಿಷತ್ ಸದಸ್ಯರಾದರು. ಬ್ರಿಟಿಷರ ಬಗ್ಗೆ ಅವರಿಗೆ ಗೌರವವಿದ್ದರೂ ಸರ್ಕಾರದ ಆಡಳಿತವನ್ನು ಅವರು ನಿರ್ದಾಕ್ಷಿಣ್ಯದಿಂದ, ನಿರ್ಭಯದಿಂದ ಟೀಕಿಸುತ್ತಿದ್ದರು. ಅವರು ಅಲಹಾಬಾದ್ ಮುನಿಸಿಪಲ್ ಬೋರ್ಡಿನ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆದರು. 1911ರಲ್ಲಿ ಐದನೆಯ ಚಾರ್ಜ್ ಮತ್ತು ಮೇರಿಯ ಸನ್ಮಾನಾರ್ಥವಾಗಿ ದೆಹಲಿಯಲ್ಲಿ ನಡೆದ ದರ್ಬಾರಿನಲ್ಲಿ ಅವರೂ ಭಾಗವಹಿಸಿದ್ದರು. 1912ರಲ್ಲಿ ಜವಾಹರರು ಇಂಗ್ಲೆಂಡಿನಿಂದ ಭಾರತಕ್ಕೆ ಮರಳುವವರೆಗೂ ಕೌಟುಂಬಿಕ ಮತ್ತು ವೃತ್ತಿಗೆ ಸಂಬಂಧಿಸಿದ ವಿಷಯಗಳಲ್ಲೇ ಅವರಿಗೆ ಹೆಚ್ಚಿನ ಆಸಕ್ತಿಯಿತ್ತು. ಆದರೆ ಅನಂತರ ಮನೆಯಲ್ಲಿ ಮತ್ತು ದೇಶದಲ್ಲಿ ಉಂಟಾದ ಅನೇಕ ಬದಲಾವಣೆಗಳಿಂದಾಗಿ ಅವರು ರಾಜಕೀಯದಲ್ಲಿ ಹೆಚ್ಚಿನ ಅಸಕ್ತಿ ವಹಿಸುವುದು ಅನಿವಾರ್ಯವಾಯಿತು.

	ಒಂದನೆಯ ಮಹಾಯುದ್ಧದ ಕಾಲದಲ್ಲಿ ರಾಜಕೀಯ ನಾಯಕರು ಚಳವಳಿಯನ್ನು ನಿಲ್ಲಿಸಿ ಸರ್ಕಾರದೊಂದಿಗೆ ಸಹಕರಿಸಿದರು. ಆದರೆ ಬ್ರಿಟಿಷ್ ಸರ್ಕಾರ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಜರೂರು ಕಾನೂನುಗಳನ್ನು ಘೋಷಿಸಿ ಭಾರತೀಯ ಪ್ರಜೆಗಳ ಅನೇಕ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿತು. ಹೊಸ ಸುಂಕ ತೆರಿಗೆಗಳನ್ನು ವಿಧಿಸಿತು. ಇದರಿಂದಾಗಿ ಕ್ಷೋಭೆಗೊಂಡ ಟಿಳಕ್, ಅನಿಬೆಸಂಟ್ ಮೊದಲಾದವರು ಸ್ವರಾಜ್ಯ ಚಳವಳಿಯನ್ನು ಪ್ರಾರಂಭಿಸಿದರು. ಮೋತಿಲಾಲರು ಪ್ರಾರಂಭದಲ್ಲಿ ಈ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ 1917ರಲ್ಲಿ ಸರ್ಕಾರ ಅನೇಕ ನಾಯಕರನ್ನು ಸೆರೆಹಿಡಿದಾಗ ಮೋತಿಲಾಲರು ಹೋರಾಟದ ರಂಗಕ್ಕಿಳಿದರು. ಅವರು ಸ್ವರಾಜ್ಯ ಒಕ್ಕೂಟದ ಅಲಹಾಬಾದ್ ಶಾಖೆಯ ಅಧ್ಯಕ್ಷರಾದರು. ಅವರ ರಾಜಕೀಯ ನಿಲುವಿನಲ್ಲಿ ಗಮನಾರ್ಹವಾದ ಬದಲಾವಣೆಯಾಯಿತು.

	ಗಾಂಧೀಜಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಮರಳಿ ಬಂದ ಅನಂತರ ಭಾರತದ ಇತಿಹಾಸದ ಗತಿ ಬದಲಾಯಿಸಿತ್ತು. ಕಾಂಗ್ರೆಸ್ ಸಂಸ್ಥೆಯಲ್ಲಿ ಹೊಸ ದೃಷ್ಟಿ ಮೂಡಿ ಅದು ರೂಪಾಂತರಗೊಂಡಿತು. ರಾಷ್ಟ್ರೀಯ ಜೀವನದಲ್ಲಿ ನವಚೇತನವುಂಟಾಯಿತು. ಇದರ ಪ್ರಭಾವ ಮೋತಿಲಾಲರ ಮತ್ತು ಅವರ ಮನೆಯವರ ಮೇಲೆ ಆಗದೆ ಹೋಗಲಿಲ್ಲ. ವಿಚಾರಣೆಯಿಲ್ಲದೆ ಯಾರನ್ನಾದರೂ ಬಂಧಿಸಬಹುದೆಂದು ಹೇಳಿದ ರಾಲೆಟ್ ಅಧಿನಿಯಮ, 1919ರಲ್ಲಿ ಗಾಂಧೀಜಿಯಿಂದ ಸತ್ಯಾಗ್ರಹ ಸಭೆಯ ಉದ್ಘಾಟನೆ-ಇವು ಜವಾಹರರನ್ನು ಉತ್ತೇಜಿಸಿದುವು. ಅವರು ಗಾಂಧೀಜಿಯವರ ಚಳವಳಿಯಲ್ಲಿ ಧುಮುಕಲು ಉತ್ಸುಕರಾದರು ಕೌಲೆಟ್ ಅಧಿನಿಯಮವನ್ನು ಪ್ರತಿಭಟಿಸಲು ಗಾಂಧೀಜಿ ಪ್ರಾರಂಭಿಸಿದ್ದ ಚಳವಳಿ ಎಲ್ಲ ಕಡೆಗೂ ಹಬ್ಬಿತು. ಕೆಲವೇ ದಿನಗಳಲ್ಲಿ ಪಂಜಾಬಿನಲ್ಲಿ ಜಲಿಯನ್‍ವಾಲಾ ಬಾಗ್ ದುರಂತ ನಡೆಯಿತು. ಹಿಂದೆಯೇ ಭಯಂಕರವಾಗಿದ್ದ ಲಷ್ಕರಿ ಶಾಸನ ಜಾರಿಯಲ್ಲಿ ಬಂತು. ಮೋತಿಲಾಲರು ದುರ್ದೆಶೆಗೀಡಾಗಿದ್ದ ಆ ಪ್ರಾಂತ್ಯದಲ್ಲಿ ನೆಮ್ಮದಿ ನೆಲಸುವಂತೆ ಸಾಧ್ಯವಾದಷ್ಟು ಪ್ರಯತ್ನ ಮಾಡಿದರು. ಲಷ್ಕರಿ ಶಾಸನದನ್ವಯ ಮರಣ ದಂಡನೆಗೆ ಇಲ್ಲವೇ ದೀರ್ಘಕಾಲದ ಜೈಲುವಾಸದ ಶಿಕ್ಷೆಗೆ ಗುರಿಯಾಗಿದ್ದವರ ರಕ್ಷಣೆಗೆ ತಮ್ಮ ಸಮಯವನ್ನು ಮೀಸಲಾಗಿರಿಸಿದರು. ಪಂಜಾಬಿನ ಘಟನೆಗಳ ಬಗ್ಗೆ ತನಿಖೆ ನಡೆಸುವ ಸಲುವಾಗಿ ಕಾಂಗ್ರೆಸ್ಸು ನೇಮಿಸಿದ ಸಮಿತಿಯ ಸದಸ್ಯರಲ್ಲಿ ಗಾಂಧೀಜಿ, ಸಿ. ಆರ್. ದಾಸ್ ಮೊದಲಾದ ನಾಯಕರೊಡನೆ ಅವರೂ ಇದ್ದರು.

	1919ರ ಡಿಸೆಂಬರಿನಲ್ಲಿ ಅಮೃತಸರದಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನಕ್ಕೆ ಮೋತಿಲಾಲರನ್ನು ಅಧ್ಯಕ್ಷರನ್ನಾಗಿ ಒಮ್ಮತದಿಂದ ಆರಿಸಲಾಯಿತು. ಅವರು ಅಧ್ಯಕ್ಷ ಭಾಷಣದಲ್ಲಿ ಪ್ರಚಲಿತ ರಾಜಕೀಯ ಪರಿಸ್ಥಿತಿಯನ್ನು ಯಥಾವತ್ತಾಗಿ ವಿವರಿಸಿ ನಾಡಿನ ಜನರ ಕರ್ತವ್ಯವೇನೆಂಬುದನ್ನು ಸೂಚಿಸಿದರು. 1920ರ ಅಂತ್ಯದಲ್ಲಿ ಕಲ್ಕತ್ತದಲ್ಲಿ ನಡೆದ ಕಾಂಗ್ರೆಸಿನ ವಿಶೇಷಾಧಿವೇಶನದಲ್ಲಿ ಗಾಂಧೀಜಿ ಕರೆಗೊಟ್ಟ ಅಸಹಕಾರ ಚಳವಳಿಯನ್ನು ಅವರು ಅನುಮೋದಿಸಿದರು. ಅರವತ್ತರಲ್ಲಿ ಕಾಲಿಕ್ಕಿದ್ದ ಮೋತಿಲಾಲರು ತಮ್ಮ ಗತಕಾಲದೊಡನೆ ಸಂಬಂಧವನ್ನು ಪೂರ್ಣವಾಗಿ ಕಡಿದುಕೊಂಡು ಅಜ್ಞಾತದಲ್ಲಿ ದುಮುಕಿದ್ದರು.

	ಕಲ್ಕತ್ತದ ಕಾಂಗ್ರೆಸ್ ಅಧಿವೇಶನದ ಅನಂತರ ಮೋತಿಲಾಲರು ಸಂಯುಕ್ತ ಪ್ರಾಂತ್ಯದ ನ್ಯಾಯವಿಧಾಯಕ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆಯಿತ್ತರು. ವರ್ಷಕ್ಕೆ ರೂ. 6,85,000 ಗಳಷ್ಟು ಆದಾಯ ತರುತ್ತಿದ್ದ ವಕೀಲಿಯನ್ನು ಬಿಟ್ಟು ಕೊಟ್ಟರು. ಅದ್ದೂರಿಯ ಜೀವನ ಬಿಟ್ಟು ಸರಳ ಜೀವನ ಪ್ರಾರಂಭಿಸಿದರು. ಮನೆಯಲ್ಲಿ ಎಲ್ಲರೂ ಒರಟು ಖಾದಿ ತೊಡತೊಡಗಿದರು.

	1921ರ ಡಿಸೆಂಬರ್ 6ರಂದು ಮೋತಿಲಾಲರ ಮತ್ತು ಜವಾಹರಲಾಲರ ದಸ್ತಗಿರಿಯಾಯಿತು. ಮಾರನೆಯ ದಿನ ಬೇರೆಬೇರೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯಿತು. ಜವಾಹರರಿಗೂ ಮೋತಿಲಾಲರಿಗೂ ಆರು ತಿಂಗಳ ಶಿಕ್ಷೆ ವಿಧಿಸಲಾಯಿತು.

	1922ರ ಫೆಬ್ರುವರಿ ತಿಂಗಳಲ್ಲಿ ಉತ್ತರಪ್ರದೇಶದ ಗೋರಖ್‍ಪುರ ಜಿಲ್ಲೆಯ ಚೌರಿ ಚೌರಾ ಎಂಬಲ್ಲಿ ಪೋಲೀಸರು ಗುಂಡಿಕ್ಕಿದ್ದರಿಂದ ಉದ್ರೇಕಗೊಂಡ ಜನ ಪೋಲೀಸ್‍ಠಾಣೆಗೆ ಬೆಂಕಿ ಹಾಕಿದರು. ಒಳಗಿದ್ದ ಪೋಲೀಸರು ಭಸ್ಮವಾದರು. ಗಾಂಧೀಜಿ ಚಳವಳಿಯನ್ನು ನಿಲ್ಲಿಸಲು ಕರೆ ನೀಡಿದರು. ಜೈಲಿನಲ್ಲಿದ್ದ ಮೋತಿಲಾಲರೇ ಮೊದಲಾದ ನಾಯಕರಿಗೆ ಇದರಿಂದ ಅಸಮಾಧಾನವಾಯಿತು. ಮೋತಿಲಾಲರು ಅಸಹಕಾರ ಚಳವಳಿಯನ್ನು ಮುಂದುವರಿಸುವಂತೆ ಗಾಂಧೀಜಿಗೆ ಪತ್ರ ಬರೆದರು. 1922ರ ಮಾರ್ಚ್ 13ರಂದು ಗಾಂಧೀಜಿ ಬಂಧಿತರಾದರು. ಅವರಿಗೆ 6 ವರ್ಷಗಳ ಶಿಕ್ಷೆ ವಿಧಿಸಲಾಯಿತು. ನಾಯಕರಿಲ್ಲದೆ ಚಳವಳಿ ತಣ್ಣಗಾಯಿತು.

	ಜೈಲಿನಲ್ಲಿದ್ದಾಗ ಮೋತಿಲಾಲರಿಗೆ ಗೂರಲು ವ್ಯಾಧಿ ವಿಷಮಿಸಿತು. ಮೂರು ತಿಂಗಳುಗಳಲ್ಲೇ ಅವರ ಬಿಡುಗಡೆಯಾಯಿತಾದರೂ ಆರು ವಾರಗಳೊಳಗೇ ಅವರನ್ನು ಮತ್ತೆ ಜೈಲಿಗೆ ಕಳಿಸಲಾಯಿತು.

	1922ರ ಜೂನ್ 6ರಂದು ಮೋತಿಲಾಲರ ಬಿಡುಗಡೆಯಾಯಿತು. ಶಾರೀರಿಕ ಕ್ಲೇಶವಾಗಲಿ ಕೌಟುಂಬಿಕ ಪರಿಸ್ಥಿತಿಯಾಗಲಿ ಅವರನ್ನು ಅಧೀರರನ್ನಾಗಿ ಮಾಡಿರಲಿಲ್ಲ. ಅವರು ಕಾಂಗ್ರೆಸಿನ ಕಾರ್ಯದರ್ಶಿತ್ವವನ್ನು ವಹಿಸಿಕೊಂಡರು. ದೇಹಾಯಾಸವನ್ನು ಲೆಕ್ಕಿಸದೆ ಊರಿಂದೂರಿಗೆ ತಿರುಗಿ ಚಳವಳಿಯ ಪ್ರಧಾನಾಂಗವಾದ ಖದ್ದರ್ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದರು. ಆದರೂ ಚಳವಳಿಯಲ್ಲಿ ಮೊದಲಿನ ಬಿರುಸಿರಲಿಲ್ಲ. ಕಾಂಗ್ರೆಸ್ ಸಂಸ್ಥೆಯಲ್ಲಿ ಬೇರೆಬೇರೆ ಬಣಗಳು ತಲೆದೋರಿದ್ದುವು. ಸಂಸ್ಥೆಯ ರಚನಾತ್ಮಕ ಕಾರ್ಯಕ್ರಮ ವಿದ್ಯಾವಂತವರ್ಗಕ್ಕೆ ಉತ್ಸಾಹದಾಯಕವಾಗಿರಲಿಲ್ಲ. ಅಸಹಕಾರ ಚಳವಳಿಯ ಕಾರ್ಯಕ್ರಮವನ್ನು ಬದಲಾಯಿಸಿ ವಿಧಾನ ಸಭೆಗಳಲ್ಲಿ ಭಾರತೀಯರು ಭಾಗವಹಿಸುವುದಕ್ಕೆ ಎಡೆಗೊಡಬೇಕೆಂದು ಮೋತಿಲಾಲರಿಗೆ ಅನ್ನಿಸಿತು. ಆದರೆ ಈ ತರದ ಬದಲಾವಣೆಯನ್ನು ಕೆಲವರು ಒಪ್ಪಲಿಲ್ಲ. ಇದರಿಂದ ಸಂಸ್ಥೆಯಲ್ಲಿ ಒಡಕುಂಟಾಗುವುದು ಖಚಿತವೆಂದು ತೋರಿತು. ಮೋತಿಲಾಲರೂ ಸಿ.ಅರ್. ದಾಸರೂ ಕೂಡಿಕೊಂಡು 1923ರ ಜನವರಿಯಲ್ಲಿ ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದರು. 1923ರ ಅಂತ್ಯದಲ್ಲಿ ಚುನಾವಣೆಗಳಲ್ಲಿ ಭಾಗವಹಿಸಿದರು. ಕೆಲವು ಪ್ರಾಂತೀಯ ಹಾಗೂ ಕೇಂದ್ರೀಯ ವಿಧಾನಸಭೆಗಳಲ್ಲಿ ಸ್ವರಾಜ್ಯ ಪಕ್ಷಕ್ಕೆ ಬಹುಮತ ದೊರೆಯಿತು. 1925ರಲ್ಲಿ ಕಾಂಗ್ರೆಸ್ಸು ಸ್ವರಾಜ್ಯ ಪಕ್ಷವನ್ನು ತನ್ನ ರಾಜಕೀಯ ವಿಭಾಗವೆಂದು ಪುರಸ್ಕರಿಸಿತು.

	ಮೋತಿಲಾಲರು ಕೇಂದ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದರು. ಭವ್ಯವಾದ ವ್ಯಕ್ತಿತ್ವ, ಕುಶಾಗ್ರಬುದ್ಧಿ ಅಪಾರವಾದ ಕಾಯಿದೆ ಜ್ಞಾನ, ವಾದ ಸಾಮಥ್ರ್ಯ, ವಾಗ್ವೈಖರಿ, ವ್ಯವಹಾರಕೌಶಲ, ಸಮಯಸ್ಪೂರ್ತಿ, ಅಸಾಧಾರಣ ಪ್ರತಿಭೆ-ಇವುಗಳ ಮೂಲಕ ಅವರು ಈ ಸ್ಥಾನಕ್ಕೆ ಯೋಗ್ಯರಾಗಿದ್ದರು. ಸ್ವರಾಜ್ಯ ಪಕ್ಷ ಸುವ್ಯವಸ್ಥಿತವಾದ ರಾಜಕೀಯ ಪಕ್ಷವಾಗಿತ್ತು. ಶಾಂತಿಯಿಂದ ನ್ಯಾಯಬದ್ಧ ರೀತಿಯಲ್ಲಿ ಸ್ವರಾಜ್ಯ ಸಾಧಿಸುವುದು ಅದರ ಗುರಿಯಾಗಿತ್ತು.

	ಆಗಿನ ಅಸೆಂಬ್ಲಿ ವಿಚಿತ್ರ ಕಲಬೆರಕೆಯಾಗಿತ್ತು. ಜಾತಿಮತಗಳ ಆಧಾರದ ಮೇಲೆ ಆಯ್ಕೆಯಾದವರು ಮತ್ತು ಸರ್ಕಾರದಿಂದ ನಾಮಕರಣಗೊಂಡ ಇಂಗ್ಲಿಷ್ ಮತ್ತು ಭಾರತೀಯ ಸದಸ್ಯರು ಗಮನಾರ್ಹ ಸಂಖ್ಯೆಯಲ್ಲಿ ಅದರಲ್ಲಿದ್ದರು. ಪ್ರಾರಂಭದಲ್ಲಿ ಮೋತಿಲಾಲರ ಪಕ್ಷ ಮಿತವಾದಿ ಮತ್ತು ಮುಸ್ಲಿಂ ಶಾಸಕರ ಬೆಂಬಲದಿಂದ ಸರ್ಕಾರದ ವಿರುದ್ಧ ಬಹುಮತ ಗಳಿಸಲು ಶಕ್ತವಾಯಿತು. ಮೋತಿಲಾಲರು ತಮ್ಮ ಪಕ್ಷವನ್ನು ದಾಢ್ರ್ಯದಿಂದ ಆಳುತ್ತಿದ್ದರು. ಅಶಿಸ್ತಿಗೆ ಅದರಲ್ಲಿ ಸ್ಥಳವಿರಲಿಲ್ಲ. ಆದರೆ 1926ರ ಅನಂತರ ಅವರಿಗೆ ತಮ್ಮ ಕೆಲಸ ಕಷ್ಟವಾಗಿ ತೋರತೊಡಗಿತು. ವೈಯಕ್ತಿಕ ಮತ್ತು ಜಾತೀಯ ಕಚ್ಚಾಟಗಳಿಂದಾಗಿ ಸ್ವರಾಜ್ಯ ಪಕ್ಷ ದುರ್ಬಲವಾಗತೊಡಗಿತು. ಮೋತಿಲಾಲರು ಹಿಂದೂ ವಿರೋಧಿ ಮುಸ್ಲಿಂ ಪಕ್ಷಪಾತಿಗಳು ಎಂಬ ದೂರುಗಳು ಕೇಳಿಬಂದುವು. ಇವು ಮೋತಿಲಾಲರಿಗೆ ಅತಿಯಾದ ಮಾನಸಿಕ ವೇದನೆಯನ್ನುಂಟುಮಾಡಿದುವು.

	1925ರ ಜೂನಿನಲ್ಲಿ ಸಿ. ಆರ್. ದಾಸರು ತೀರಿಕೊಂಡ ಬಳಿಕ ಮೋತಿಲಾಲರು ಸ್ವರಾಜ್ಯ ಪಕ್ಷದ ಅಧ್ಯಕ್ಷರಾದರು. ಅವರು ಕಾಂಗ್ರೆಸ್ಸಿನ ಅಧ್ಯಕ್ಷರೂ ಆಗಬೇಕೆಂಬುದು ಗಾಂಧೀಜಿಯವರ ಅಭಿಲಾಷೆಯಾಗಿತ್ತು. ಆದರೆ ಮತ್ತೊಮ್ಮೆ ಚುನಾವಣೆಗಳಲ್ಲಿ ನಿರತರಾಗಿದ್ದ ಮೋತಿಲಾಲರು ಇದಕ್ಕೆ ಒಪ್ಪಲಿಲ್ಲ. ಆ ಸಲ ಅವರು ಏಕಾಕಿಯಾಗಿ ಚುನಾವಣೆಗಳನ್ನೆದುರಿಸಬೇಕಾಯಿತು. ಮಾನಸಿಕ ಆತಂಕ ಹಾಗೂ ದೈಹಿಕ ಶ್ರಮದಿಂದ ಅವರ ಆರೋಗ್ಯ ಕೆಟ್ಟಿತು. ಅದರಿಂದ ವಿಶ್ರಾಂತಿಯ ಸಲುವಾಗಿ ಅವರು 1927ರ ಬೇಸಗೆಯಲ್ಲಿ ವಿದೇಶ ಪ್ರವಾಸ ಕೈಗೊಂಡರು. ಸ್ವಿಟ್‍ಜûರ್ಲೆಂಡ್, ಇಂಗ್ಲೆಂಡ್, ಸೋವಿಯೆತ್ ದೇಶ, ಜರ್ಮನಿ ಮೊದಲಾದ ದೇಶಗಳಿಗೆ ಅವರು ಭೇಟಿಯಿತ್ತರು.

	ಮೋತಿಲಾಲರು ಭಾರತಕ್ಕೆ ಮರಳಿದ ಬಳಿಕ ಸ್ವಾತಂತ್ರ್ಯಸಾಧನೆಯೊಂದೇ ಅವರ ಜೀವನದ ಗುರಿಯಾಯಿತು. ಅವರ ಪ್ರೇರಣೆಯಿಂದ 1928ರ ಮೇ 18ರಂದು ಡಾ. ಅನ್ಸಾರಿಯವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಮ್ಮೇಳನವೊಂದು ಸೇರಿತು. ಅದು ಮೋತಿಲಾಲರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯೊಂದನ್ನು ನೇಮಿಸಿತು. ಅವರು ಇತರ ಸದಸ್ಯರ ಅಭಿಪ್ರಾಯಗಳನ್ನು ತಿಳಿದುಕೊಂಡು ತಮ್ಮ ಕಾನೂನು ಪಾಂಡಿತ್ಯವನ್ನೆಲ್ಲ ಉಪಯೋಗಿಸಿ ಅತ್ಯಲ್ಪ ಕಾಲದಲ್ಲಿ ಸಂವಿಧಾನ ಸಂಬಂಧವಾದ ವರದಿಯೊಂದನ್ನು ಒಪ್ಪಿಸಿದರು. ಬ್ರಿಟಿಷ್ ಚಕ್ರಾಧಿಪತ್ಯದ ಅಡಿಯಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಯೇ ಆ ವರದಿಯ ಮುಖ್ಯಾಂಶವಾಗಿತ್ತು. ಮೋತಿಲಾಲರು ಜಾತೀಯತೆಯ ಸಮಸ್ಯೆಗೂ ಪರಿಹಾರ ಸೂಚಿಸಿದ್ದರು. ಆದರೆ ಆಗಾಖಾನ್, ಜಿನ್ನಾ ಮೊದಲಾದ ಮುಖಂಡರ ನೇತೃತ್ವದಲ್ಲಿದ್ದ ಮುಸ್ಲಿಮರಿಗೆ ಈ ವರದಿ ಒಪ್ಪಿಗೆಯಾಗಲಿಲ್ಲ.

	ಮೋತಿಲಾಲರು ವಕೀಲಿಯನ್ನು ಮತ್ತೆ ಕೈಗೊಂಡರು. ಆರ್ಥಿಕ ಅಡಚಣೆಗಳೇ ಇದಕ್ಕೆ ಕಾರಣ. ಆದರೆ ಸತ್ಯಾಗ್ರಹಿಗಳು ಆಳರಸರ ನ್ಯಾಯಾಲಯಗಳಲ್ಲಿ ವಾದಿಸಲಾಗದೆಂದು ಕಾಂಗ್ರೆಸ್ಸು ನಿರ್ಣಯ ತೆಗೆದುಕೊಂಡಿದ್ದರಿಂದ ಅವರು ಅಲ್ಪಕಾಲದಲ್ಲೇ ಅದನ್ನು ತ್ಯಜಿಸಬೇಕಾಯಿತು.

	ಡಿಸೆಂಬರ್ 1928ರಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ಮೋತಿಲಾಲರು ಅಧ್ಯಕ್ಷರಾದರು. ಬ್ರಿಟನ್ ಒಂದು ವರ್ಷದೊಳಗಾಗಿ ಸಮಧಿರಾಜ್ಯ (ಡೊಮಿನಿಯನ್) ಸ್ಥಾನವನ್ನು ಭಾರತಕ್ಕೆ ಕೊಡದಿದ್ದಲ್ಲಿ ಕಾಂಗ್ರೆಸ್ಸು ಪೂರ್ಣಸ್ವಾತಂತ್ರ್ಯವನ್ನು ಕೇಳಬೇಕು ಮತ್ತು ಅವಶ್ಯವಿದ್ದಲ್ಲಿ ಅದಕ್ಕಾಗಿ ಅಸಹಕಾರ ಚಳವಳಿಯ ಮೂಲಕ ಹೋರಾಡಬೇಕು ಎಂಬ ಗಾಂಧಿಯವರ ಸೂಚನೆಯನ್ನು ಅಧಿವೇಶನ ಒಪ್ಪಿತು.

	1929ರ ಚಳಿಗಾಲದಲ್ಲಿ ಲಾಹೋರಿನಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಅಸಹಕಾರ ಚಳವಳಿಯನ್ನು ಮುಂದುವರಿಸಬೇಕೆಂಬ ನಿರ್ಣಯವಾಯಿತು. ಮೋತಿಲಾಲರೂ ಅವರ ಅನುಯಾಯಿಗಳೂ ವಿಧಾನಸಭೆಗೆ ರಾಜೀನಾಮೆಯಿತ್ತು ಚಳವಳಿಯಲ್ಲಿ ದುಮುಕಿದರು. ಮೋತಿಲಾಲರು ಆನಂದಭವನವನ್ನು ಕಾಂಗ್ರೆಸಿಗೆ ದಾನಮಾಡಿ ಜವಾಹರರಿಗೆಂದು ಕಟ್ಟಿಸಿದ್ದ ನೂತನ ಭವನಕ್ಕೆ ತಮ್ಮ ಕುಟುಂಬವನ್ನು ಸಾಗಿಸಿದರು.

	ಮಾನಸಿಕ ಕ್ಲೇಶ, ಚಳವಳಿಯ ಪ್ರವಾಸದ ಶ್ರಮ-ಇವು ಮೋತಿಲಾಲರ ದೇಹವನ್ನು ದುರ್ಬಲವಾಗಿ ಮಾಡಿದುವು. ಹೃದಯವೂ ದುರ್ಬಲವಾಯಿತು. ಗೂರಲು ಉಲ್ಬಣಗೊಂಡಿತು. ಆದರೂ ಅವರು ಹಟದಿಂದ ತಮ್ಮ ಕಾರ್ಯವನ್ನು ವಿಶ್ರಾಂತಿಯಿಲ್ಲದೆ ಮುಂದುವರಿಸಿದರು.

	1930ರ ಏಪ್ರಿಲ್ 6ರಂದು ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದರು. ಏಪ್ರಿಲ್ 14ರಂದು ಸರ್ಕಾರ ಜವಾಹರರನ್ನು ಬಂಧಿಸಿ ಆರು ತಿಂಗಳ ಸೆರೆಮನೆ ಶಿಕ್ಷೆ ವಿಧಿಸಿತು. ಚಳವಳಿ ಭರದಿಂದ ಸಾಗಿತು. ಮೇ 5ರಂದು ಗಾಂಧೀಜಿ ಸೆರೆಮನೆ ಸೇರಿದರು. ಕಾಂಗೆಸ್ಸಿನ ಹಂಗಾಮಿ ಅಧ್ಯಕ್ಷರಾಗಿದ್ದ ಮೋತಿಲಾಲರು ವ್ಯೆದರ ಸಲಹೆಯನ್ನು ಮೀರಿ ಮುಂಬಯಿಗೆ ಹೋಗಿ ಮುಷ್ಕರ ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸಿದರು. ಆದರೆ ಅನಾರೋಗ್ಯದಿಂದಾಗಿ ವಿಶ್ರಾಂತಿಗಾಗಿ ಮಸ್ಸೂರಿಗೆ ಹೋಗಲು ಅಲಹಾಬಾದಿಗೆ ಮರಳಿದರು. ಸರ್ಕಾರ 1930ರ ಜೂನ್ 30ರಂದು ಅವರನ್ನು ಬಂಧಿಸಿ ಸೆರೆಮನೆಯಲ್ಲಿಟ್ಟಿತು.

	ಮೋತಿಲಾಲರ ದೇಹಾರೋಗ್ಯ ಕೆಟ್ಟಿದ್ದರಿಂದ ಹತ್ತು ವಾರಗಳಲ್ಲಿ ಸರ್ಕಾರ ಅವರನ್ನು ಬಿಡುಗಡೆ ಮಾಡಿತು. 1931ರ ಫೆಬ್ರವರಿ 6ರಂದು ಲಖನೌದಲ್ಲಿ ಮೋತಿಲಾಲರು ತೀರಿಕೊಂಡರು. ಅಲಹಾಬಾದಿನಲ್ಲಿ ಅವರ ದೇಹಕ್ಕೆ ಅಂತ್ಯಕ್ರಿಯೆ ನಡೆಯಿತು.

	ಮೋತಿಲಾಲರು ಗಾಂಧಿಯುಗದ ರಾಷ್ಟ್ರಾಭಿಮಾನಿ ಮಹಾವ್ಯಕ್ತಿಗಳಲ್ಲೊಬ್ಬರು. ದೇಶಕ್ಕಾಗಿ ಅವರು ಮಾಡಿದ ತ್ಯಾಗ ಬಲು ದೊಡ್ಡದು. ಅವರು ರಾಜಕೀಯ ರಂಗಕ್ಕಿಳಿದದ್ದು ತಮ್ಮ ಜೀವಮಾನದ ಕೊನೆಯ ಹಂತದಲ್ಲಿ. ವಿಶ್ರಾಂತಿ ಬಯಸಬೇಕಾದ ಕಾಲದಲ್ಲಿ ಅವರು ಚಳವಳಿಯಲ್ಲಿ ಭಾಗವಹಿಸಿದರು. ರಾಷ್ಟ್ರಕ್ಕಾಗಿ ಸ್ವಸಂತೋಷದಿಂದ ತಮ್ಮ ಅಪಾರ ಸಂಪತ್ತನ್ನೂ ಸುಖಸಾಧನಗಳನ್ನೂ ತೊರೆದು ಹೋರಾಟದ ಕಠಿಣ ಜೀವನವನ್ನು ಸ್ವೀಕರಿಸಿದರು. ತಾವು ಮಾಡಿದ ತ್ಯಾಗಕ್ಕಾಗಿ ಅವರು ಎಂದೂ ವಿಷಾದಿಸಲಿಲ್ಲ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ